ನಿರ್ಜಲಾಮ್ಲ -
	ಆಮ್ಲದಿಂದ ಒಂದು ಅಥವಾ ಹೆಚ್ಚು ನೀರಿನ ಅಣುಗಳನ್ನು ತೆಗೆದಾಗ ಉಳಿಯುವ ಆಮ್ಲ (ಆ್ಯಸಿಡ್ ಅನ್‍ಹೈಡ್ರೆಡ್). ಉದಾಹರಣೆಗೆ ಸಲ್ಫ್ಯೂರಿಕ್ ಆಮ್ಲದ (H2SO4) ನಿರ್ಜಲಾ ಆಮ್ಲ SO3. ನಿರ್ಜಲಾಮ್ಲಗಳು ಕಾರ್ಬನಿಕ ಹಾಗೂ ಅಕಾರ್ಬನಿಕ ರಾಸಾಯನಿಕ ಗುಣಗಳುಳ್ಳ ಸಂಯುಕ್ತಗಳು. ನೇರವಾಗಿ ಅಕಾರ್ಬನಿಕ ನಿರ್ಜಲಾಮ್ಲಗಳನ್ನು ಪಡೆಯುವುದು ಸಾಧ್ಯ. ಸಾರ ಸಲ್ಫ್ಯೂರಿಕ್ ಆಮ್ಲ ಮತ್ತು ಸಾರ ನೈಟ್ರಿಕ್ ಆಮ್ಲಗಳನ್ನು ಫಾಸ್ಫರಸ್ ಪೆಂಟಾಕ್ಸೈಡಿನಿಂದ ಶುಷ್ಕೀಕರಿಸಿದರೆ ಸಲ್ಫ್ಯೂರಿಕ್ ಮತ್ತು ನೈಟ್ರಿಕ್ ನಿರ್ಜಲಾಮ್ಲಗಳು ದೊರೆಯುತ್ತವೆ. ಫಾಸ್ಫರಸಿನ ಭಸ್ಮವೇ ಫಾಸ್ಫಾರಿಕ್ ನಿರ್ಜಲಾಮ್ಲ. ಆದರೆ ಕಾರ್ಬನಿಕ್ ನಿರ್ಜಲಾಮ್ಲಗಳನ್ನು ಹೀಗೆ ತಯಾರಿಸಲು ಸಾಧ್ಯವಿಲ್ಲ.

	ನಿರ್ಜಲಾಮ್ಲಗಳಲ್ಲಿ ಕಾರ್ಬನಿಕ್ ನಿರ್ಜಲಾಮ್ಲ ಅತೀ ಮುಖ್ಯವಾದುದು. ಅಣು ರಚನೆಯಲ್ಲಿ ಇದು ಈಥರ್ ಮತ್ತು ಎಸ್ಟರ್‍ಗಳನ್ನು ಹೋಲುತ್ತದೆ: 

ಚಿತ್ರ-1

ಬೇರೆ ಬೇರೆ ವಿಧದ ಎರಡು ಆಮ್ಲಗಳಿಂದ ಮಿಶ್ರ ನಿರ್ಜಲಾಮ್ಲಗಳನ್ನು ಪಡೆಯಬಹುದು (ಚಿತ್ರ2) :

	ತಟಸ ಗುಣವುಳ್ಳ ದ್ರವ ಅಥವಾ ಘನ ವಸ್ತುಗಳಿವು. ಹಿತವಲ್ಲದ ಘಾಟು ವಾಸನೆ ಇವುಗಳಿಗೆ ಇದೆ. ಕ್ವಥನ ಬಿಂದುಗಳು ಮೂಲ ಆಮ್ಲಗಳ ಕ್ವಥನ ಬಿಂದುಗಳಿಗಿಂತ ಅಧಿಕ. ಕಾರ್ಬನಿಕ ದ್ರಾವಕಗಳಲ್ಲಿ ವ್ಯತ್ಯಾಸ ಹೊಂದದೆ ವಿಲೀನವಾಗುತ್ತವೆ. ಮದ್ಯಸಾರ, ಫಿನಾಲುಗಳೊಡನೆ ಇವು ಆಮ್ಲ ಕ್ಲೋರೈಡುಗಳಂತೆಯೇ ಕ್ರಿಯೆ ಹೊಂದುತ್ತವೆ.

ಚಿತ್ರ-2

	ಇವು ಅಸಿಟೈಲ್ ಕ್ಲೋರೈಡಿಗಿಂತ ಕಡಿಮೆ ಚಟುವಟಿಕೆಉಳ್ಳವಾದ್ದರಿಂದ ಇವನ್ನು ಸೆಲ್ಯೂಲೋಸ್ ಅಸಿಟೇಟ್, ಆಸ್ಪಿರಿನ್ ಅಸಿಟ್ ಅನಿಲೈಡ್ ಮತ್ತು ಇತರ ಔಷಧಗಳ ತಯಾರಿಕೆಯಲ್ಲಿ ಅಸಿಟಿಲೇಟಿಂಗ್ ಕಾರಕವಾಗಿ ಉಪಯೋಗಿಸುತ್ತಾರೆ.
(ಬಿ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ